ದೇವರು ಯೇಸುವನ್ನು ಸತ್ತವರೊಳಗಿಂದ ಎಬ್ಬಿಸಿದನು

ದೇವರು ಯೇಸುವನ್ನು ಸತ್ತವರೊಳಗಿಂದ ಎಬ್ಬಿಸಿದನು

bookmark

ಸೈನಿಕರು ಯೇಸುವನ್ನು ಶಿಲುಬೆಗೇರಿಸಿದ ನಂತರ, ಯೆಹೂದ್ಯ ಮುಖಂಡರು ಪಿಲಾತನಿಗೆ, "ಆ ಸುಳ್ಳುಗಾರನಾದ ಯೇಸು ಮೂರು ದಿನಗಳ ನಂತರ ತಾನು ಸತ್ತವರೊಳಗಿಂದ ಎದ್ದುಬರುತ್ತೇನೆಂದು ಹೇಳಿದ್ದಾನೆ. ಆತನ ಶಿಷ್ಯರು ದೇಹವನ್ನು ಕದ್ದುಕೊಂಡುಹೋಗದಂತೆ ಸಮಾಧಿಯನ್ನು ಯಾರಾದರೂ ಕಾಯಬೇಕು. ಇಲ್ಲದಿದ್ದರೆ ಅವರು ಅದನ್ನು ಕದ್ದುಕೊಂಡುಹೋಗಿ ಆತನು ಸತ್ತವರೊಳಗಿಂದ ಎದ್ದುಬಂದಿದ್ದಾನೆಂದು ಅವರು ಹೇಳುತ್ತಾರೆ" ಎಂದು ಹೇಳಿದರು.

ಪಿಲಾತನು, "ನೀವು ಕೆಲವು ಮಂದಿ ಸೈನಿಕರು ಕರೆದುಕೊಂಡು ಹೋಗಿ ಆದಷ್ಟು ಭದ್ರವಾಗಿ ಸಮಾಧಿಯನ್ನು ಕಾಯಿರಿ" ಎಂದು ಹೇಳಿದನು. ಆದ್ದರಿಂದ ಅವರು ಸಮಾಧಿಯ ದ್ವಾರದಲ್ಲಿದ್ದ ಕಲ್ಲಿನ ಮೇಲೆ ಮುದ್ರೆಯನ್ನು ಹಾಕಿದರು. ಯಾರೂ ದೇಹವನ್ನು ಕದ್ದುಕೊಂಡುಹೋಗದಂತೆ ಅವರು ಸೈನಿಕರನ್ನು ಅಲ್ಲಿ ಕಾವಲಿರಿಸಿದರು.

ಯೇಸು ಸತ್ತ ದಿನದ ಮರುದಿನವು ಸಬ್ಬತ್ ದಿನವಾಗಿತ್ತು. ಸಬ್ಬತ್ ದಿನದಲ್ಲಿ ಯಾರೂ ಕೆಲಸ ಮಾಡಬಾರದಿತ್ತು, ಆದ್ದರಿಂದ ಯೇಸುವಿನ ಸ್ನೇಹಿತರಲ್ಲಿ ಯಾರು ಆತನ ಸಮಾಧಿಯ ಬಳಿಗೆ ಹೋಗಲಿಲ್ಲ. ಆದರೆ ಸಬ್ಬತ್ ದಿನದ ಮರುದಿನ, ಮುಂಜಾನೆಯಲ್ಲೇ ಅನೇಕ ಸ್ತ್ರೀಯರು ಯೇಸುವಿನ ಸಮಾಧಿಯ ಬಳಿಗೆ ಹೋಗಲು ಸಿದ್ಧರಾದರು. ಅವರು ಆತನ ದೇಹದ ಮೇಲೆ ಹೆಚ್ಚು ಸುಗಂಧದ್ರವ್ಯಗಳನ್ನು ಹಚ್ಚಲು ಬಯಸಿದರು.

ಸ್ತ್ರೀಯರು ಬರುವುದಕ್ಕಿಂತ ಮೊದಲು ಸಮಾಧಿಯ ಬಳಿಯಲ್ಲಿ ದೊಡ್ಡ ಭೂಕಂಪ ಉಂಟಾಯಿತು. ಪರಲೋಕದಿಂದ ದೇವದೂತನು ಇಳಿಬಂದು, ಸಮಾಧಿಯ ದ್ವಾರಕ್ಕೆ ಮುಚ್ಚಿದ್ದ ಕಲ್ಲನ್ನು ಉರುಳಿಸಿಬಿಟ್ಟು ಅದರ ಮೇಲೆ ಕುಳಿತುಕೊಂಡನು. ಈ ದೇವದೂತನು ಮಿಂಚಿನಂತೆ ಪ್ರಕಾಶಮಾನವಾಗಿ ಹೊಳೆಯುತ್ತಿದ್ದನು. ಸಮಾಧಿಯ ಬಳಿಯಲ್ಲಿದ್ದ ಸೈನಿಕರು ಅವನನ್ನು ನೋಡಿದರು. ಅವರು ಹೆದರಿ ನಡುಗಿ ಸತ್ತವರ ಹಾಗಾದರು.

ಸ್ತ್ರೀಯರು ಸಮಾಧಿಯ ಬಳಿಗೆ ಬಂದಾಗ ದೇವದೂತನು ಅವರಿಗೆ, "ಭಯಪಡಬೇಡಿರಿ, ಯೇಸು ಇಲ್ಲಿಲ್ಲ, ಆತನು ತಾನು ಹೇಳಿದಂತೆಯೇ ಸತ್ತವರೊಳಗಿಂದ ಎದ್ದಿದ್ದಾನೆ! ಬನ್ನಿರಿ ಸಮಾಧಿಯನ್ನು ನೋಡಿರಿ" ಎಂದು ಹೇಳಿದನು. ಸ್ತ್ರೀಯರು ಸಮಾಧಿಯೊಳಗೆ ನೋಡಿ ಮತ್ತು ಯೇಸುವಿನ ದೇಹವನ್ನು ಇಟ್ಟಿದ್ದ ಸ್ಥಳವನ್ನು ನೋಡಿದರು. ಆತನ ದೇಹವು ಅಲ್ಲಿರಲಿಲ್ಲ!

ಆಗ ದೇವದೂತನು ಸ್ತ್ರೀಯರಿಗೆ, "ಹೋಗಿರಿ, ಯೇಸು ಸತ್ತವರೊಳಗಿಂದ ಎದ್ದಿದ್ದಾನೆ ಮತ್ತು ಆತನು ನಿಮಗಿಂತಲೂ ಮೊದಲೇ ಗಲಿಲಾಯಕ್ಕೆ ಹೋಗುತ್ತಾನೆ ಎಂದು ಶಿಷ್ಯರಿಗೆ ಹೇಳಿರಿ" ಎಂದು ಹೇಳಿದನು.

ಸ್ತ್ರೀಯರು ಆಶ್ಚರ್ಯಚಕಿತರು ಮತ್ತು ಅತಿ ಸಂತೋಷವುಳ್ಳವರು ಆದರು. ಅವರು ಶಿಷ್ಯರಿಗೆ ಶುಭವಾರ್ತೆಯನ್ನು ಹೇಳಲು ಓಡಿಹೋದರು.

ಶಿಷ್ಯರಿಗೆ ಶುಭವಾರ್ತೆಯನ್ನು ಹೇಳಲು ಸ್ತ್ರೀಯರು ಹೋಗುತ್ತಿರುವಾಗ ಯೇಸು ಅವರಿಗೆ ಕಾಣಿಸಿಕೊಂಡನು. ಅವರು ಆತನ ಪಾದಗಳಿಗೆ ಅಡ್ಡಬಿದ್ದರು. ಆಗ ಯೇಸು, "ಭಯಪಡಬೇಡಿರಿ, ನನ್ನ ಶಿಷ್ಯರ ಬಳಿಗೆ ಹೋಗಿ ಗಲಿಲಾಯಕ್ಕೆ ಹೋಗಬೇಕೆಂದು ಅವರಿಗೆ ಹೇಳಿರಿ, ಅಲ್ಲಿ ಅವರು ನನ್ನನ್ನು ನೋಡುವರು" ಎಂದು ಹೇಳಿದನು.

ಸತ್ಯವೇದದ ಕಥೆ: ಮತ್ತಾಯ 27:62-28:15; ಮಾರ್ಕ 16:1-11; ಲೂಕ 24:1-12; ಯೋಹಾನ 20:1-18